ಚಾಲ್ರ್ಸ್ (ಫ್ರಾನ್ಸಿನ ದೊರೆಗಳು) -

ಚಾಲ್ರ್ಸ್ I : ಪವಿತ್ರ ರೋಮನ್ ಸಾಮ್ರಾಜ್ಯದ ಚಾಲ್ರ್ಸ್ II. (ನೋಡಿ- ಚಾಲ್ರ್ಸ್-(ಪವಿತ್ರ-ರೋಮನ್-ಚಕ್ರವರ್ತಿಗಳು))

ಚಾಲ್ರ್ಸ್ II: ಪವಿತ್ರ ರೋಮನ್ ಸಾಮ್ರಾಜ್ಯದ ಚಾಲ್ರ್ಸ್ III. (ನೋಡಿ- ಚಾಲ್ರ್ಸ್-(ಪವಿತ್ರ-ರೋಮನ್-ಚಕ್ರವರ್ತಿಗಳು)) 

ಚಾಲ್ರ್ಸ್ III : ಚಾಲ್ರ್ಸ್ ದಿ ಸಿಂಪಲ್ ಎಂದು ಇವನ ಹೆಸರು. 893-923ರಲ್ಲಿ ಫ್ರಾನ್ಸಿನ ದೊರೆಯಾಗಿದ್ದ. ಎರಡನೆಯ ಲೂಯಿಯ ಮರಣೋತ್ತರ ಪುತ್ರ. ಜನನ 879. ಚಕ್ರವರ್ತಿ ಮೂರನೆಯ ಚಾಲ್ರ್ಸ್ (ದಿ ಫ್ಯಾಟ್) ಪದಚ್ಯುತಿಗೊಂಡಾಗ (887) ಈತ ತೀರ ಎಳೆಯವನೆಂಬ ಕಾರಣದಿಂದ ಇವನಿಗೆ ಸಿಂಹಾಸನ ದೊರಕಲಿಲ್ಲ. ಅಡೊನ ಆಡಳಿತ ನಡೆದಾಗ ಕೆಲವು ಪ್ರತಿಷ್ಠಿತರು ರೇಮ್ಸ್‍ನಲ್ಲಿ ಈತನಿಗೆ ಪಟ್ಟ ಕಟ್ಟಿದರು. ಸಮ್ರಾಟ ಆರ್ನೆಲ್ಫನ ಬೆಂಬಲವೂ ಈತನಿಗೆ ದೊರೆಯಿತು. ಆಡೊ ಇವನಿಗೆ ರಾಜ್ಯದ ಕೆಲವು ಭಾಗಗಳನ್ನು ಬಿಟ್ಟುಕೊಟ್ಟ. 898ರಲ್ಲಿ ಆಡೊ ಸತ್ತಾಗ ಇಡೀ ರಾಜ್ಯಕ್ಕೆ ಈತ ದೊರೆಯಾದ. ನಾರ್ಮನರ ಜೊತೆ ಒಪ್ಪಂದ ಮಾಡಿಕೊಂಡು ಅವರಲ್ಲಿ ಅನೇಕರನ್ನು ಕ್ರೈಸ್ತಮತಕ್ಕೆ ಪರಿವರ್ತಿಸಿದ್ದು ಇವನ ಹಿರಿಯ ಕೃತಿ (911). 922ರಲ್ಲಿ ಪ್ರಮುಖರು ರಾಬರ್ಟನನ್ನು ದೊರೆಯಾಗಿ ಆರಿಸಿದರು. ಚಾಲ್ರ್ಸ್ ಅವನ ಮೇಲೆ ಯುದ್ಧ ಮಾಡಿ ಅವನನ್ನು ಕೊಂದನಾದರೂ ಅನಂತರ ಸೆರೆ ಸಿಕ್ಕ. ಬಂಧನದಲ್ಲೇ ಆತ ತೀರಿಕೊಂಡ.

ಚಾಲ್ರ್ಸ್ IV : 1322-28ರಲ್ಲಿ ಫ್ರಾನ್ಸಿನ ದೊರೆಯಾಗಿದ್ದ ಈತನಿಗೆ ಚಾಲ್ರ್ಸ್ ದಿ ಫೇರ್ ಎಂದು ಹೆಸರು. ದೊರೆ 4ನೆಯ ಫಿಲಿಪನ ಮೂರನೆಯ ಮಗ. 1322ರಲ್ಲಿ ತನ್ನ ಅಣ್ಣ 5ನೆಯ ಫಿಲಿಪ್ ತೀರಿಕೊಂಡಾಗ ಅವನ ಹೆಣ್ಣುಮಕ್ಕಳ ಹಕ್ಕನ್ನು ಬದಿಗೊತ್ತಿ ಈತ ಪಟ್ಟಕ್ಕೆ ಬಂದ. 1324ರಿಂದ 1327ರವರೆಗೆ ಇಂಗ್ಲೆಂಡ್ ಜೊತೆ ಯುದ್ಧ ನಡೆಸಿದ. ಫ್ರಾನ್ಸಿನಲ್ಲಿದ್ದ ಇಂಗ್ಲಿಷ್ ದೊರೆಯ ಜಹಗೀರನ ಕೆಲವು ಭಾಗಗಳನ್ನು ಕಸಿದುಕೊಂಡ. 1328ರಲ್ಲಿ ಈತ ತೀರಿಕೊಂಡಾಗ ಕಪೇಶಿಯನ್ ವಂಶದ ನೇರ ಉತ್ತರಾಧಿಕಾರದ ಕೊನೆಯಾಯಿತು.

ಚಾಲ್ರ್ಸ್ V : 1364-80ರಲ್ಲಿ ಫ್ರಾನ್ಸಿನ ದೊರೆ, ಇಂಗ್ಲೆಂಡಿನೊಂದಿಗೆ ನಡೆದ ನೂರು ವರ್ಷಗಳ ಯುದ್ಧದ ಸಂದಿಗ್ಧ ಸಮಯದಲ್ಲಿ ಫ್ರಾನ್ಸನ್ನು ರಕ್ಷಿಸಿದ ಸಮರ್ಥ. ದೊರೆ 2ನೆಯ ಜಾನನ ಮಗ. 1337ರಲ್ಲಿ ಜನಿಸಿದ. ಇಂಗ್ಲೆಂಡಿನೊಂದಿಗೆ ನಡೆದ ಯುದ್ಧದಲ್ಲಿ 1356ರಲ್ಲಿ ಆಂಗ್ಲರು ಜಾನನನ್ನು ಬಂಧಿಸಿ ಒಯ್ದಾಗ ರಾಜ್ಯಾಡಳಿತವನ್ನು ಸಮರ್ಥವಾಗಿ ನಿರ್ವಹಿಸಿದ ಈತ ಆ ಕಾಲದಲ್ಲಿ ಅನೇಕ ನೊಬೆಲ್‍ಗಳಿಂದಲೂ ಪ್ಯಾರಿಸಿನ ನಾಯಕರಿಂದಲೂ ವಿರೋಧವನ್ನು ಎದುರಿಸಬೇಕಾಯಿತು. ಇವನ ತಂದೆಯ ಶತ್ರುವಾಗಿದ್ದು, ಅವನಿಂದ ಬಂಧಿತನಾಗಿದ್ದ ನವಾರ್‍ನ ಚಾಲ್ರ್ಸ್ ಬಿಡುಗಡೆ ಹೊಂದಿ ಅನ್ಯ ನಾಯಕರ ಚೊತೆ ಸೇರಿ ಅವನ ಅಧಿಕಾರವನ್ನು ವಿರೋಧಿಸಿ, ಬ್ರಿಟಿಷರೊಂದಿಗೆ ಸ್ನೇಹ ಮಾಡಿದ್ದ. ಎಸ್ಟೇಟ್ಸ್-ಜನರಲ್ 1358ರಲ್ಲಿ ಚಾಲ್ರ್ಸ್‍ನಿಗೆ ಕರ ಸಂಗ್ರಹಿಸುವ ಅಧಿಕಾರ ನೀಡಿ, ಯುದ್ಧ ಮುಂದುವರಿಸಲು ಇದ್ದ ಹಣದ ಅಡಚಣೆಯನ್ನು ನಿವಾರಿಸಿತು. ಜಾನ್ 1359ರಲ್ಲಿ ಸೆರೆಯಿಂದ ಬಿಡುಗಡೆ ಹೊಂದಲು ಪ್ರಯತ್ನಿಸಿ ಲಂಡನಿನಲ್ಲಿ ಬ್ರಿಟನ್ನಿನ ಜೊತೆಗೆ ಮಾಡಿಕೊಂಡ ಒಪ್ಪಂದವನ್ನು ತಿರಸ್ಕರಿಸಲು ಚಾಲ್ರ್ಸ್‍ನಿಗೆ ಎಸ್ಟೇಟ್ಸ್-ಜನರಲ್ ಅನುಮತಿ ನೀಡಿತಲ್ಲದೆ ಯುದ್ಧವನ್ನು ಮುಂದುವರಿಸಲು ಅಧಿಕಾರ ನೀಡಿ ಹಣ ಮಂಜೂರು ಮಾಡಿತು. 1359ರ ಅಕ್ಟೋಬರಿನಲ್ಲಿ ಇಂಗ್ಲೆಂಡಿನ 3ನೆಯ ಎಡ್ವರ್ಡ್ ಫ್ರಾನ್ಸಿನ ಮೇಲೆ ದಂಡೆತ್ತಿ ಬಂದ. ಮುಂದೆ 1360ರಲ್ಲಿ ಬ್ರಿಟನ್ನಿನೊಂದಿಗೆ ಒಪ್ಪಂದವಾಯಿತು. ಎಡ್ವರ್ಡ್ ಸ್ವದೇಶಕ್ಕೆ ಮರಳಿದ. ಈ ಒಪ್ಪಂದದಂತೆ ಫ್ರಾನ್ಸ್ ನೀಡಬೇಕಾಗಿದ್ದ ಒತ್ತೆ ಹಣವನ್ನು ನೀಡಲಾಗಲಿಲ್ಲ. 1360ರಲ್ಲಿ ಮುಕ್ತನಾದ ಜಾನ್ ಇಂಗ್ಲೆಂಡಿಗೆ ಮರಳಿ 1364ರಲ್ಲಿ ಅಲ್ಲಿ ತೀರಿಕೊಂಡ. ಅದೇ ವರ್ಷ ಚಾಲ್ರ್ಸನಿಗೆ ಕಿರೀಟಧಾರಣೆಯಾಯಿತು. 1371ರಲ್ಲಿ ಯುದ್ಧ ಮತ್ತೆ ಆರಂಭವಾಯಿತು. ಫ್ರಾನ್ಸಿನದು ಮೇಲ್ಗೈಯಾಯಿತು. ಗಾರೊನ್ ನದಿಯ ಉತ್ತರಕ್ಕೆ ಬ್ರಿಟಿಷರ ವಶದಲ್ಲಿದ್ದ ಎಲ್ಲ ಫ್ರೆಂಚ್ ಪ್ರದೇಶಗಳನ್ನೂ ಅವರು ಬಿಟ್ಟುಕೊಡಬೇಕಾಯಿತು. 1380ರ ಹೊತ್ತಿಗೆ ಕೇವಲ ಐದು ಫ್ರೆಂಚ್ ಪಟ್ಟಣಗಳಷ್ಟೇ ಅವರ ವಶದಲ್ಲಿ ಉಳಿದುವು.

ಚಾರಿತ್ರ್ಯವಂತನೂ, ಸಮಾಧಾನಚಿತ್ತದವನೂ, ದೂರದೃಷ್ಟಿಯವನೂ ಆದ ಚಾಲ್ರ್ಸ್ ಒಳ್ಳೆಯ ಸಲಹೆಗಾರರನ್ನು ಹೊಂದಿದ್ದ. ಆಡಳಿತ ಅರ್ಥವ್ಯವಸ್ಥೆಗಳನ್ನು ಚೆನ್ನಾಗಿ ರೂಪಿಸಿದ. ಶ್ರೀಮಂತರ ಶಕ್ತಿಯನ್ನು ಮಿತಗೊಳಿಸಿದ. ಆತನಿಗೆ ತತ್ತ್ವಜ್ಞಾನ, ವೈದ್ಯ, ಜ್ಯೋತಿಷ್ಯಗಳಲ್ಲಿ ಆಸ್ಥೆಯಿತ್ತು. ಆತ ಒಂದು ಒಳ್ಳೆಯ ಗ್ರಂಥಾಲಯವನ್ನು ಸ್ಥಾಪಿಸಿದ್ದ.

ಚಾಲ್ರ್ಸ್ VI : 1380-1422ರಲ್ಲಿ ಫ್ರಾನ್ಸಿನ ದೊರೆಯಾಗಿದ್ದವ. ಐದನೆಯ ಚಾಲ್ರ್ಸನ ಮಗ. 1368ರಲ್ಲಿ ಜನಿಸಿದ. ಈತ ಪಟ್ಟಕ್ಕೆ ಬಂದಾಗ ಇನ್ನೂ ಎಳೆಯನಾಗಿದ್ದ. ರಾಜನ ಸಂಬಂಧಿಗಳೂ ಕೆಲವು ಗಣ್ಯ ಶ್ರೀಮಂತರೂ ಆರಂಭದಲ್ಲಿ ಆಡಳಿತ ನಿರ್ವಹಿಸಿದರು. ಆದರೆ ಈತ ಪಟ್ಟಕ್ಕೆ ಬಂದಾಗಲೇ ಫ್ರಾನ್ಸಿನ ಅನೇಕ ನಗರಗಳು ಭಾರಿ ಕರಭಾರದ ವಿರುದ್ಧವಾಗಿ ಬಂಡೆದ್ದುವು. ಫ್ಲಾಂಡರ್ಸಿನ ನಗರಗಳಿಗೆ ಇಂಗ್ಲೆಂಡು ನೆರವು ಕಳುಹಿಸಿತು. 1392ರಲ್ಲಿ ಚಾಲ್ರ್ಸನಿಗೆ ಹುಚ್ಚು ಹಿಡಿಯಿತು. ಬರ್ಗಂಡಿ ಮತ್ತು ಆರ್ಲಿಯನ್ಸಿನ ಡ್ಯೂಕರ ನಡುವಣ ಈಷ್ರ್ಯೆಯು ಅಂತಃಕಲಹಕ್ಕೆ ಅವಕಾಶವಾಯಿತು. ಬರ್ಗಂಡಿಯ ಡ್ಯೂಕನಾದ ಜಾನ್ ಈ ಕಲಹದಲ್ಲಿ ಬ್ರಿಟನ್ನಿನ ಅವಕಾಶವಾಯಿತು. ಬರ್ಗಂಡಿಯ ಡ್ಯೂಕನಾದ ಜಾನ್ ಈ ಕಲಹದಲ್ಲಿ ಬ್ರಿಟನ್ನಿನ ನೆರವು ಕೇಳಿದ. 1407ರಲ್ಲಿ ಆರ್ಲಿಯನ್ಸ್ ಡ್ಯೂಕನ ಕೊಲೆಯಾಯಿತು. ಅವನ ಉತ್ತರಾಧಿಕಾರಿ ಅರ್ಮಾನ್ಯಾಕ್ ಎಂಬ ಪಕ್ಷ ಕಟ್ಟಿದ. ಇಂಗ್ಲೆಂಡಿನ 5ನೆಯ ಹೆನ್ರಿ ಫ್ರಾನ್ಸಿನ ಮೇಲೆ ದಂಡೆತ್ತಿ ಬಂದ. ಎಜಿನ್‍ಕೋರ್ಟ್ ಯುದ್ಧದಲ್ಲಿ ಚಾಲ್ರ್ಸನ ಇಬ್ಬರು ಹಿರಿಯ ಮಕ್ಕಳು ತೀರಿಕೊಂಡರು (1415). ಬರ್ಗಂಡಿಯವರು ರಾಜನ ಮಿತ್ರರಾದ ಅರ್ಮಾನ್ಯಾಕ್ ಪಕ್ಷದವರ ಮೇಲೆ ಸೇಡು ತೀರಿಸಿಕೊಳ್ಳಲು ರಾಣಿ ಇಸಬೆಲ್ಲಳನ್ನು ಬಂಧಿಸಿ 1418ರಲ್ಲಿ ಪ್ಯಾರಿಸನ್ನು ಗೆದ್ದುಕೊಂಡರು. 5ನೆಯ ಹೆನ್ರಿ ನಾರ್ಮಂಡಿಯನ್ನು ಗೆದ್ದ. 1420ರಲ್ಲಿ ರಾಣಿ ಬ್ರಿಟಿಷರೊಂದಿಗೆ ಟ್ರೂವ ಒಪ್ಪಂದ ಮಾಡಿಕೊಂಡು ಇಂಗ್ಲೆಂಡಿನ ಹೆನ್ರಿಯನ್ನು ಫ್ರಾನ್ಸಿನ ರಾಜ್ಯರಕ್ಷಕನೆಂದು ಮಾನ್ಯ ಮಾಡಿದಳು. ಚಾಲ್ರ್ಸನ ಹುಚ್ಚು ಹೋಗಲೇ ಇಲ್ಲ. ಹುಚ್ಚ ಚಾಲ್ರ್ಸ್ ಎಂದೇ ಇವನಿಗೆ ಹೆಸರಾಯಿತು. 1422ರಲ್ಲಿ ಈತ ತೀರಿಕೊಂಡ.

ಚಾಲ್ರ್ಸ್ VII : 1422-61ರಲ್ಲಿ ದೊರೆಯಾಗಿದ್ದ. ಚಾಲ್ರ್ಸ್ ದಿ ವಿಕ್ಟೋರಿಯಸ್ ಎಂದು ಹೆಸರು. ಆರನೆಯ ಚಾಲ್ರ್ಸನ ಐದನೆಯ ಮಗ. 1403ರಲ್ಲಿ ಜನನ. 1416ರಲ್ಲಿ ರಾಜ್ಯದ ಉತ್ತರಾಧಿಕಾರಿಯಾಗಿಯೂ, 1418ರಲ್ಲಿ ರಾಜ್ಯರಕ್ಷಕನಾಗಿಯೂ ಆಯ್ಕೆಯಾದ. 1420ರ ಟ್ರೂವ ಒಪ್ಪಂದದಿಂದ ಅವನು ಪಟ್ಟದ ಹಕ್ಕನ್ನು ಕಳೆದುಕೊಂಡ. ತಂದೆಯ ಮರಣಾನಂತರ ಲ್ವಾರ್ ನದಿಯ ದಕ್ಷಿಣಕ್ಕಿರುವ ಪ್ರಾಂತ್ಯಗಳನ್ನಾಳುತ್ತಿದ್ದ ಈತ ಬೂರ್ಜ್ ನಗರದ ದೊರೆಯೆಂದೇ ಹೆಸರು ಹೊಂದಿದ್ದ. ತನ್ನ ಅನುಯಾಯಿಗಳ ನಡುವಣ ಕಲಹಗಳಿಂದಾಗಿ ಈತ ಬ್ರಿಟಿಷರ ವಿರುದ್ಧ ಹೋರಾಡಲಾಗಲಿಲ್ಲ. ಪ್ಯಾರಿಸಿನಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಪ್ರತಿನಿಧಿ ಬೆಡ್‍ಫರ್ಡ್ ಡ್ಯೂಕ್ ಉತ್ತರ ಫ್ರಾನ್ಸಿನಲ್ಲಿ ಆಡಳಿತವನ್ನು ಭದ್ರಗೊಳಿಸಿ ಆರ್ಲಿಯನ್ಸನ್ನು ಗೆಲ್ಲಲು ಮುಂದೆ ಸಾಗಿದಾಗ ಜೋನ್ (ಆಫ್ ಆರ್ಕ್) ಎಂಬ ದೇಶಭಕ್ತೆ ನಗರವನ್ನು ರಕ್ಷಿಸಿದಳು (1428). ಮುಂದೆ ಅದೇ ವರ್ಷ ರೀಮ್ಸ್ ಪಟ್ಟಣದಲ್ಲಿ ಚಾಲ್ರ್ಸ್‍ಗೆ ಕಿರೀಟಧಾರಣೆಯಾಯಿತು. 1435ರಲ್ಲಿ ಬೆಡ್‍ಫರ್ಡ್ ಡ್ಯೂಕ್ ತೀರಿಕೊಂಡ. ಅದೇ ವರ್ಷ ಚಾಲ್ರ್ಸನೊಂದಿಗೆ ಬರ್ಗಂಡಿಯ ಡ್ಯೂಕ್ ಒಪ್ಪಂದ ಮಾಡಿಕೊಂಡ. 1436ರಲ್ಲಿ ಪ್ಯಾರಿಸ್ ಚಾಲ್ರ್ಸನ ವಶವಾಯಿತು. ಅರ್ಥವ್ಯವಸ್ಥೆಯ ಮೇಲೆ ಹಿಡಿತ ತರಲು ಯತ್ನಗಳಾದುವು. ಆದರೆ ಮತ್ತೆ ರಾಜ್ಯದಲ್ಲಿ ಬಂಡಾಯ ಕಾಣಿಸಿಕೊಂಡಿತು. ರಾಜವಂಶದವರೂ ರಾಜಪುತ್ರ ಲೂಯಿಯೂ ಬಂಡಾಯದ ನಾಯಕರಾಗಿದ್ದರು (1440). ಆದರೆ ಚಾಲ್ರ್ಸ್ ಬಂಡಾಯವನ್ನು ಹತ್ತಿಕ್ಕಿ ಕೆಲವು ನಾಯಕರನ್ನು ದಾನನೀತಿಯಿಂದ ಗೆದ್ದುಕೊಂಡ. 1444ರಲ್ಲಿ ಇಂಗ್ಲೆಂಡಿನೊಂದಿಗೆ ಒಪ್ಪಂದವಾಯಿತು. ಮುಂದೆ ಇಂಗ್ಲಿಷರನ್ನು ಫ್ರಾನ್ಸಿನಿಂದ ಅಟ್ಟಿದ. ಕ್ಯಾಲೆ ಪಟ್ಟಣವೊಂದೇ ಅದರ ವಶದಲ್ಲಿ ಉಳಿದಿತ್ತು. 1446ರಲ್ಲಿ ರಾಜಕುಮಾರ ಲೂಯಿ ಮತ್ತೆ ಬಂಡೆದ್ದು ಡಾಫಿನಾದಲ್ಲಿ ಸ್ವತಂತ್ರ ರಾಜನಂತೆ ಇರತೊಡಗಿದ. ತನ್ನ ತಂದೆಯ ಸಾವಿನ ತನಕ ನಾನಾ ರೀತಿಯಲ್ಲಿ ಚಾಲ್ರ್ಸನಿಗೆ ಲೂಯಿ ತೊಂದರೆ ಕೊಡುತ್ತಲೇ ಇದ್ದ. ನೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸಿ ಬ್ರಿಟಿಷರನ್ನು ಫ್ರಾನ್ಸಿನಿಂದ ಅಟ್ಟಿದ್ದು ಚಾಲ್ರ್ಸನ ಹಿರಿಯ ಸಾಧನೆ.

ಚಾಲ್ರ್ಸ್ VIII : 1483-98ರಲ್ಲಿ ದೊರೆಯಾಗಿದ್ದ. ಹನ್ನೊಂದನೆಯ ಲೂಯಿಯ ಮಗ. 1470ರಲ್ಲಿ ಜನನ. ಇವನು ಪಟ್ಟಕ್ಕೆ ಬಂದಾಗ ಕೇವಲ ಬಾಲಕ ಈತ ವಯಸ್ಸಿಗೆ ಬರುವವರೆಗೆ ಇವನ ಸೋದರಿ ಆನ್ ಇವನ ಅಧಿಕಾರ ರಕ್ಷಣೆ ಮಾಡಿದಳು. ಬ್ರಿಟನ್ನಿನ ಆನಳೊಂದಿಗೆ ಚಾಲ್ರ್ಸನ ಮದುವೆ ಏರ್ಪಡಿಸಿ, ಆ ಪ್ರಾಂತ್ಯ ಫ್ರಾನ್ಸಿಗೆ ಸೇರುವಂತೆ ಮಾಡಿದಳು. ಕಾನ್ಸ್‍ಟಾಂಟಿನೋಪಲಿನ ಸಮ್ರಾಟನಾಗಬೇಕೆಂದು ಕನಸು ಕಂಡ ಚಾಲ್ರ್ಸ್ ಬ್ರಿಟನ್ ಮತ್ತು ಆರಗಾನ್‍ಗಳ ಜೊತೆಗೆ ಫ್ರಾನ್ಸಿಗೆ ಘಾತಕವೆನಿಸುವ ಒಪ್ಪಂದಗಳನ್ನು ಮಾಡಿಕೊಂಡು (1494) ಇಟಲಿಯ ನೇಪಲ್ಸ್‍ನ ಅಧಿಕಾರಕ್ಕೆ ಹಾತೊರೆದು ಅಲ್ಲಿಗೆ ಹೋದ (1495). ನೇಪಲ್ಸಿನಿಂದ ಮುಂದೆ ಪೂರ್ವಕ್ಕೆ ದಂಡೆಯಾತ್ರೆಯನ್ನು ವಿಫಲಗೊಳಿಸಿತು. ಈತ ಫ್ರಾನ್ಸಿಗೆ ಮರಳಿ ಮತ್ತೆ ದಂಡಯಾತ್ರೆ ನಡೆಸುವ ಯತ್ನದಲ್ಲಿದ್ದಾಗ ಅಪಘಾತದಲ್ಲಿ ಸತ್ತ.

ಚಾಲ್ರ್ಸ್ IX : 1560-74ರಲ್ಲಿ ದೊರೆಯಾಗಿದ್ದ. ಎರಡನೆಯ ಹೆನ್ರಿಯ ಮಗ. ಜನನ 1550. ತನ್ನ ಅಣ್ಣ 2ನೆಯ ಫ್ರಾನ್ಸಿಸ್ 1560ರಲ್ಲಿ ತೀರಿಕೊಂಡಾಗ ಪಟ್ಟಕ್ಕೆ ಉತ್ತರಾಧಿಕಾರಿಯಾದ ಈತನನ್ನು ಬಾಲ್ಯದಲ್ಲೇ ಕ್ಷಯ ಮತ್ತು ಮಾನಸಿಕ ತೊಂದರೆಗಳು ಪೀಡಿಸಿದುವು. ಇವನ ತಾಯಿ ಕ್ಯಾದರಿನ್ ಮೆಡಿಚಿ ರಾಜ್ಯವ್ಯವಹಾರಗಳನ್ನು ನೋಡಿಕೊಂಡಳು. ಪವಿತ್ರ ರೋಮನ್ ಸಮ್ರಾಟ ಮ್ಯಾಕ್ಸಿಮಿಲಿಯನನ ಮಗಳು ಎಲಿಜûಬೆತಳನ್ನು ಇವನು ವರಿಸಿದ (1570) ಬಾರ್ತೊಲೋಮ್ಯೂ ದಿನದ ಹತ್ಯಾಕಾಂಡ ಎಂದು ಪ್ರಸಿದ್ಧವಾಗಿರುವ ಉಗುನಾಟ್‍ಗಳ ಭಾರಿ ಕೊಲೆಗೆ (1572) ಇವನ ತಾಯಿ ಕಾರಣಳಾದಳು. ಚಾಲ್ರ್ಸನಿಗೆ ರಾಜ್ಯಾಡಳಿತದಲ್ಲಿ ಅಷ್ಟೇನೂ ಆಸ್ಥೆಯಿರಲಿಲ್ಲ. ಬೇಟೆಯಲ್ಲೂ ಸಾಹಿತ್ಯದಲ್ಲೂ ಅಭಿರುಚಿಯಿತ್ತು. ವಿವಾಹಿತ ಪತ್ನಿಯಲ್ಲಿ ಇವನಿಗೆ ಮಕ್ಕಳಾಗಲಿಲ್ಲ.

ಚಾಲ್ರ್ಸ್ X : ಇವನು 1824-30ರಲ್ಲಿ ಫ್ರಾನ್ಸಿನ ದೊರೆಯಾಗಿದ್ದ. 15ನೆಯ ಲೂಯಿಯ ಮೊಮ್ಮಗ. ಜನನ 1757ರಲ್ಲಿ. ಈತ ಆಟ್ರ್ವಾದ ಕೌಂಟ್ ಆಗಿದ್ದ. ತಾರುಣ್ಯದಲ್ಲಿ ಫ್ರೆಂಚ್ ಸೇನೆಯಲ್ಲಿ ಸೇವೆ ಸಲ್ಲಿಸಿ, ಕ್ರಾಂತಿಯಾದಾಗ ದೇಶಭ್ರಷ್ಟರಾದ ಶ್ರೀಮಂತರೊಂದಿಗೆ ವಿದೇಶಕ್ಕೆ ತೆರಳಿ ರಾಜಪಕ್ಷಕ್ಕೆ ಬೆಂಬಲಗಳಿಸಲು ಯೂರೋಪಿನಲ್ಲೆಲ್ಲ ಸಂಚರಿಸಿದ. ನೆಪೋಲಿಯನ್ನನ ಪತನಾನಂತರ ಫ್ರಾನ್ಸಿಗೆ ಮರಳಿ, ತನ್ನ ಸೋದರ 18ನೆಯ ಲೂಯಿಯ ಆಡಳಿತ ಕಾಲದಲ್ಲಿ ತೀವ್ರವಾದ ರಾಜಪಕ್ಷದ ನಾಯಕನಾಗಿದ್ದ; ಲೂಯಿಯ ನಿಧನಾನಂತರ ಸಿಂಹಾಸನವನ್ನೇರಿದನಾದರೂ ಶೀಘ್ರವೇ ಇವನ ಜನಪ್ರಿಯತೆ ಕಡಿಮೆಯಾಯಿತು. 1789ರ ಕ್ರಾಂತಿ ನಡೆಯಲೇ ಇಲ್ಲವೇನೋ ಎನ್ನುವಂತೆ ಜನಾಭಿಪ್ರಾಯವನ್ನು ಕಡೆಗಣಿಸಿ ಆಳಲು ಯತ್ನಿಸಿ. 1830ರ ಜುಲೈ ಕ್ರಾಂತಿಯಿಂದ ಪದಚ್ಯುತನಾದ. ಇಂಗ್ಲೆಂಡಿಗೆ ಪಲಾಯನ ಮಾಡಿ 1836ರಲ್ಲಿ ತೀರಿಕೊಂಡ. ಈತ ಬೂರ್ಬೊ ವಂಶದ ಕೊನೆಯ ದೊರೆ.					(ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ